ಕೆಂದಾಳೆ
ಸ್ಯಾಪಿಂಡೇಸೀ ಕುಟುಂಬಕ್ಕೆ ಸೇರಿದ ಒಂದು ದೊಡ್ಡ ಗಾತ್ರದ ಮರ. ಸ್ಲೀಶೆರ ಟ್ರೈಜುಗ ಇದರ ವೈಜ್ಞಾನಿಕ ನಾಮ. ಬಳಕೆಯ ಇಂಗ್ಲಿಷ್‍ನಲ್ಲಿ ಇದನ್ನು ಸಿಲೋನ್ ಓಕ್ ಎಂದು ಹೇಳುತ್ತಾರೆ. ಕನ್ನಡದಲ್ಲಿ ಸಗಡೆ ಕೆಂದಾಳ, ಚೆಂಡಾಲ, ಚಕೋತ ಎಂಬ ಇತರ ಹೆಸರುಗಳೂ ಇವೆ. ಕರ್ನಾಟಕ, ಪಂಜಾಬ್, ಬಿಹಾರ್, ಮಧ್ಯಪ್ರದೇಶ, ಹಿಮಾಲಯದ ತಪ್ಪಲುಗಳಲ್ಲೂ, ಶ್ರೀಲಂಕಾದಲ್ಲೂ ಮಿಶ್ರಪರ್ಣ ಪಾತಿ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಸಂಯುಕ್ತ ಮಾದರಿಯವು; ಪರ್ಯಾಯವಾಗಿ ಜೋಡಣೆಗೊಂಡಿವೆ; ವೃಂತಪರ್ಣಗಳಿಲ್ಲ. ಡಿಸೆಂಬರಿನಿಂದ ಫೆಬ್ರುವರಿ ತಿಂಗಳಿನ ಮಧ್ಯಾವಧಿಯಲ್ಲಿ ಎಲೆಗಳೆಲ್ಲ ಉದುರಿ ಏಪ್ರಿಲ್ ತಿಂಗಳಲ್ಲಿ ಹೊಸ ಚಿಗುರು ಮೂಡುತ್ತದೆ. ಹೊಸ ಎಲೆಗಳೊಂದಿಗೆ ಹೂಗಳು ಕೂಡ ಹುಟ್ಟುತ್ತವೆ.  ಹೂಗಳು ಏಕಲಿಂಗಗಳಾಗಿರಬಹುದು ಇಲ್ಲವೆ ದ್ವಿಲಿಂಗಗಳಾಗಿರಬಹುದು. ಗಂಡು, ಹೆಣ್ಣು ಹಾಗೂ ದ್ವಿಲಿಂಗಿ ಹೂಗಳು ಒಂದೇ ಮರದಲ್ಲಿರಬಹುದು ಇಲ್ಲವೆ ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಮರಗಳಲ್ಲಿರಬಹುದು. ಹೂಗೊಂಚಲು ಸಂಕೀರ್ಣವಾದ ಅಂತ್ಯಾರಂಭಿ ಮಾದರಿಯದು. ಹೂಗಳಲ್ಲಿ ಹಸಿರುಮಿಶ್ರಿತ ಹಳದಿ ಬಣ್ಣದ 4-6 ಪುಷ್ಪಪತ್ರಗಳು, 5-8 ಕೇಸರಗಳು, ಮೂರು ಕಾರ್ಪೆಲ್‍ಗಳ ಉಚ್ಚಸ್ಥಾನದ ಅಂಡಾಶಯ ಇವೆ, ದಳಗಳಿಲ್ಲ.

ಭಾರತದಲ್ಲಿ ಬೆಳೆಯುವ ಅರಗು ಮರಗಳಲ್ಲೆಲ್ಲ ಕೆಂದಾಳೆ ಅತ್ಯುತ್ತಮವಾದುದೆಂದು ಹೆಸರು ಪಡೆದಿದೆ. ಇದರ ಎಳೆಯ ರೆಂಬೆಗಳ ಮೇಲೆ ಅರಗುಕೀಟಗಳನ್ನು ಸಾಕಿ ಉತ್ತಮದರ್ಜೆಯ ಹಾಗೂ ಬಹಳ ಬೆಲೆ ಬಾಳುವ ಅರಗನ್ನು ಉತ್ಪಾದಿಸುತ್ತಾರೆ. ಈ ಮರದ ಚೌಬೀನೆ ಹೆಚ್ಚು ಗಡುಸಾದುದು ಮತ್ತು ಬಾಳಿಕೆ ಬರುವಂಥದು. ಇದನ್ನು ಹದಮಾಡುವುದು ಕಷ್ಟ. ಬಿಸಿಲಿನಲ್ಲಿ ಒಣಗಿಸಿದರೆ ಇದು ಸೀಳಿಹೋಗುತ್ತದೆ. ಹಸಿ ಮರವನ್ನು ಸುಲಭವಾಗಿ ಕೊಯ್ಯಬಹುದು. ನೆರಳಿನಲ್ಲಿ ನಿಧಾನವಾಗಿ ಒಣಗಿಸಬೇಕು. ಚೌಬೀನೆ ಬಲು ಭಾರವಾಗಿದ್ದು (ಘನ ಅಡಿಯೊಂದಕ್ಕೆ 65-70 ಪೌಂ. ತೂಗುತ್ತದೆ). ಆದ್ದರಿಂದ ಇದನ್ನು ಗಾಡಿಚಕ್ರ, ಯಂತ್ರಗಳಲ್ಲಿ ಘರ್ಷಣ ಭಾಗಗಳು, ಎಣ್ಣೆ ಮತ್ತು ಅಕ್ಕಿ ಗಿರಣಿಗಳಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ ಆಯುಧಗಳ ಹಿಡಿಗೂ ಗಣಿಗಳಲ್ಲಿ ಆಸರೆಗಂಬಗಳಾಗಿಯೂ ಇದನ್ನು ಬಳಸುವುದುಂಟು. ಕೆಂದಾಳೆಯ ಬೀಜದಲ್ಲಿ ಒಂದು ಬಗೆಯ ಎಣ್ಣೆಯಿದೆ. ಇದನ್ನು ಸಾಬೂನು, ಸುಗಂಧ ತೈಲಗಳ ತಯಾರಿಕೆಯಲ್ಲಿ ಮತ್ತು ದೀಪ ಉರಿಸಲು ಬಳಸುತ್ತಾರೆ. ಎಣ್ಣೆಯನ್ನೂ ತೊಗಟೆಯನ್ನೂ ಚರ್ಮದ ತುರಿಯಲ್ಲಿ ಔಷಧಿಯಾಗಿಯೂ ತೊಗಟೆಯನ್ನು ಪ್ರತಿಬಂಧಕವಾಗಿಯೂ ಉಪಯೋಗಿಸುತ್ತಾರೆ.     
   (ವಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ